
ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಜೂ.25 ರಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವೆಡೆ ಚದುರಿದಂತೆ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಮುಂದುವರಿದಿದ್ದು, ಆದರೆ ಮಳೆಯ ಆರ್ಭಟ ಕಡಿಮೆಯಾಗಿದೆ.
ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾನುವಾರ ಸೂರ್ಯಗ್ರಹಣದ ನಡುವೆ ಬೆಳಗ್ಗೆಯಿಂದ ಮೋಡ ಬಿಸಿಲಿನ ವಾತಾವರಣವಿತ್ತು. ಇಡೀ ದಿನ ಆಗಾಗ ಮಳೆ ಸುರಿಯಿತು. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಹಲವು ದಿನಗಳಿಂದ ಅಬ್ಬರಿಸಿದ್ದ ಮಳೆ ಭಾನುವಾರ ಸ್ವಲ್ಪ ಬಿಡುವು ನೀಡಿತ್ತು. ಆಗಾಗ ಮಳೆ ಸುರಿದರೂ ಬಿರುಸಾಗಿರಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿದಿದೆ. ಮೈಸೂರಿನಲ್ಲಿ ಸಂಜೆ ಬಿರುಸಾಗಿ ಮಳೆ ಸುರಿಯಿತು.ದಾವಣಗೇರೆ, ಕೊಡುಗು ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಕಲ್ಯಾಣ ಕರ್ನಾಟಕದ ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಅಲ್ಲಲ್ಲಿ ಚದುರಿದ ಮಳೆಯಾಯಿತು.
6 ಬ್ಯಾರೇಜ್ ಸಂಚಾರಕ್ಕೆ ಮುಕ್ತ:
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಲ್ಲಿ ಮುಳುಗಡೆಯಾಗಿದ್ದ ಎಲ್ಲ 6 ಬ್ಯಾರೇಜ್‌ಗಳೂ ಸಂಚಾರಕ್ಕೆ ಮುಕ್ತಗೊಂಡಿವೆ.
ಯೆಲ್ಲೋ ಅಲರ್ಟ್:
ರಾಜ್ಯದ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಜೂ.22 ಮತ್ತು 23ರಂದು ಈ ಮೂರೂ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
Share your comments