ಕರಾವಳಿ ಭಾಗದ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಗಲೇ ಮುಂಗಾರು ಆರ್ಭಟ ಮುಂದುವರೆದಿದ್ದು, ಕರಾವಳಿ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ನೈರುತ್ಯ ಮುಂಗಾರು ಬಿರುಸುಗೊಂಡಿರುವುದರಿಂದ ಸೆ.12 ಮತ್ತು 13ರಂದು ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೆ.13ರಂದು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.
ಬೆಳಗಾವಿ, ಬೀದರ್, ಧಾರವಾಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ರಾಜ್ಯದಲ್ಲಿ ಕಳೆದ ವಾರದಿಂದ ಮಳೆ ಬಿರುಸುಗೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿಯಿತು. ಅರಬ್ಬಿ ಸಮುದ್ರದಲ್ಲಿ ಬಿರಾಗಾಳಿ ಎದ್ದಿದ್ದು, 100 ಕ್ಕೂ ಹೆಚ್ಚು ಮೀನುಗಾರಿಕೆ ಬೋಟ್ಗಳು ಕಾರವಾರ ತೀರಕ್ಕೆ ಬಂದು ರಕ್ಷಣೆ ಪಡೆದಿವೆ.
ಮಳೆ-ಎಲ್ಲಿ,ಎಷ್ಟು?:
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಗರಿಷ್ಠ 30 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ 26, ಪಣಂಬೂರು 23, ಮೂಡುಬಿದರೆ, ಕುಂದಾಪುರ, ಕಾರ್ಕಳ 13, ಬೆಳ್ತಂಗಡಿ 12, ಭಟ್ಕಳ 7, ಉಡುಪಿ 6, ಭಾಗಮಂಡಲ 5, ವಿರಾಜಪೇಟೆ 4, ಬೈಲಹೊಂಗಲ, ಕಂಪ್ಲಿ 3, ಪುತ್ತೂರು, ಸುಳ್ಯ, ಮೂಡಿಗೆರೆ 2, ಉಪ್ಪಿನಂಗಡಿ, ಹುಕ್ಕೇರಿ, ಚಿತ್ರದುರ್ಗ, ಹಿರಿಯೂರು, ಪಾವಗಡ, ಗುಬ್ಬಿ, ಕೊಪ್ಪದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ
Share your comments