ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಹೇಗೆ ರಕ್ಷಣಾ ಕಾರ್ಯ ಕೈಗೊಳ್ಳಬೇಕು ಎಂಬ ಬಗ್ಗೆ ‘ಅಣಕು ಪ್ರದರ್ಶನ’ ಪ್ರಾತ್ಯಕ್ಷಿಕೆಯು ಮಡಿಕೇರಿ ತಾಲ್ಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ನೇತೃತ್ವದಲ್ಲಿ ಶನಿವಾರ ನಡೆಯಿತು.
ಜಿಲ್ಲಾಡಳಿತ, ಎನ್‍ಡಿಆರ್‍ಎಫ್, ಪೊಲೀಸ್ ಮತ್ತು ಅಗ್ನಿಶಾಮಕ, ಗೃಹ ರಕ್ಷಕ ದಳ ಹೀಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ‘ಅಣಕು ಪ್ರದರ್ಶನ’ ಪ್ರಾತ್ಯಕ್ಷಿಕೆ ನಡೆಯಿತು. ಭೂಕುಸಿತ, ಪ್ರವಾಹ ಮತ್ತಿತರ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಅಂತಹ ಸ್ಥಳದಲ್ಲಿ ವಿದ್ಯುತ್ ಕಡಿತಗೊಳಿಸುವುದು, ಘಟನಾ ಸ್ಥಳವನ್ನು ಸೀಲು ಮಾಡುವುದು, ಬಳಿಕ ರಕ್ಷಣಾ ಕಾರ್ಯ ಕೈಗೊಂಡು ಪ್ರಥಮ ಚಿಕಿತ್ಸೆ ನೀಡುವುದು, ಗಂಭೀರ ಗಾಯವಾಗಿದ್ದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು... ಹೀಗೆ 9 ಕ್ಕೂ ಹೆಚ್ಚು ರೀತಿಯ ಅಣಕು ಪ್ರದರ್ಶನ ಜರುಗಿತು.
ಅಣಕು ಪ್ರದರ್ಶನದಲ್ಲಿ ಎನ್‍ಡಿಆರ್‍ಎಫ್, ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯವರು ಕೈಜೋಡಿಸಿದರು. ಹೆಚ್ಚಿನ ಮಳೆಯಿಂದ ಪ್ರವಾಹ, ಭೂಕುಸಿತ ಹೀಗೆ ವಿವಿಧ ರೀತಿಯ ಅತೀವೃಷ್ಟಿ ಉಂಟಾದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು.
ಅಣಕು ಕಾರ್ಯಾಚರಣೆಯಲ್ಲಿ ಎನ್‍ಡಿಆರ್‍ಎಫ್ ತಂಡದ ಇನ್ಸ್‍ಪೆಕ್ಟರ್ ಶಾಂತಿಲಾಲ್ ಜಾಟಿಯಾ ಅವರ ನೇತೃತ್ವದಲ್ಲಿ 23 ಮಂದಿ, ಪೊಲೀಸ್ ಇಲಾಖೆಯಿಂದ ಡಿಎಆರ್ ತಂಡದ ಆರ್‍ಪಿಐ ಚೆನ್ನನಾಯಕ ನೇತೃತ್ವದಲ್ಲಿ 15 ಜನ ಪೊಲೀಸರು, ಅಗ್ನಿಶಾಮಕ ಇಲಾಖೆಯಿಂದ ನಾಗರಾಜು ನೇತೃತ್ವದಲ್ಲಿ 8 ಮಂದಿ, ಗೃಹ ರಕ್ಷಕ ದಳ ವಿಭಾಗದಿಂದ ಅಕ್ಷಯ್ ಅವರ ನೇತೃತ್ವದ 8 ಮಂದಿ ಸಿಬ್ಬಂದಿಗಳು, ಒಟ್ಟು 54 ಸಿಬ್ಬಂದಿಗಳು ಅಣಕು ಪ್ರದರ್ಶನದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
‘ಪ್ರವಾಹ, ಭೂಕುಸಿತ ಮತ್ತಿತರ ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಹೇಗೆ ಕಾರ್ಯಾಚರಣೆ ಕೈಗೊಂಡು ರಕ್ಷಣೆ ಮಾಡಲಾಗುತ್ತದೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ವೆಂಕಟ್ ರಾಜಾ ಅವರು ತಿಳಿಸಿದರು.’ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸರಾಸರಿಯಷ್ಟು ಮಳೆಯಾಗುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ವಿವರಿಸಿದರು.
ಎನ್‍ಡಿಆರ್‍ಎಫ್ ತಂಡದ ಪ್ರಮುಖರಾದ ಅರ್ಜುನ್ ಅವರು ಮಾತನಾಡಿ ಪ್ರಾಕೃತಿಕ ವಿಕೋಪದಿಂದ ಭೂಕುಸಿತ ಹಾಗೂ ಪ್ರವಾಹ ಉಂಟಾದಲ್ಲಿ ಹೇಗೆ ರಕ್ಷಣಾ ಕಾರ್ಯ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ವಿವರಿಸಲಾಗಿದೆ. ಆ ನಿಟ್ಟಿನಲ್ಲಿ ವಿವಿಧ ರಕ್ಷಣಾ ಚಟುವಟಿಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ ಎಂದು ಅವರು ಹೇಳಿದರು.
Share your comments