ರಾಷ್ಟ್ರೀಯ ಉದ್ಯಾನದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದಕ್ಕೆ ರಾಜ್ಯ ಸರಕಾರ ತೆರೆಮರೆಯಲ್ಲೇ 'ಉತ್ಸಾಹ' ತೋರುತ್ತಿದ್ದು, ವನ್ಯಜೀವಿಗಳ ಸಹಜ ಬದುಕಿಗೆ ಕಂಟಕವುಂಟಾಗುವ ಅಪಾಯ ಮತ್ತೊಮ್ಮೆ ಎದುರಾಗಿದೆ.
ರಾತ್ರಿ ಸಂಚಾರ ನಡೆಸುವ ವಾಹನಗಳಿಗೆ ಸಿಲುಕಿ ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳು ಅಪಾರ ಪ್ರಮಾಣದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಸರ ಹೋರಾಟಗಾರರು ನಡೆಸಿದ ಪ್ರಯತ್ನದಿಂದಾಗಿ ರಾತ್ರಿ ಸಂಚಾರ ನಿಷೇಧಿಸುವಂತೆ 2010ರಲ್ಲಿ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನವನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸಿತ್ತು.
ಆದರೆ ಕೇರಳ ಸರಕಾರ, ನಿಷೇಧ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಒಂದು ದಶಕಗಳ ಕಾಲ ಯಾವುದೇ ಆತಂಕವಿಲ್ಲದೇ ನಡೆಯುತ್ತಿದ್ದ ಈ ವ್ಯವಸ್ಥೆಗೆ ಈಗ ಅಡ್ಡಿಯುಂಟಾಗುವ ಸಂಭವ ಇದೆ. ಈ ಹೆದ್ದಾರಿಯಲ್ಲಿ 5 ಎಲಿವೇಟೆಡ್ ರಸ್ತೆ ನಿರ್ಮಿಸುವುದಕ್ಕೆ ತೊಂದರೆಯಿಲ್ಲ ಎಂದು ಕೇಂದ್ರ ಭೂ ಸಾರಿಗೆ ಇಲಾಖೆಯು ಸುಪ್ರೀಂ ಕೋರ್ಟ್ಗೆ ವರದಿ ನೀಡಿದೆ. ಕೇರಳ ಸರಕಾರ ಇದನ್ನು ಸ್ವಾಗತಿಸಿದ್ದು, ರಾಜ್ಯ ಸರಕಾರ ಕೂಡಾ ಒಪ್ಪಿಗೆ ನೀಡಲು ಮುಂದಾಗಿದೆ ಎಂಬ ವರ್ತಮಾನ ವನ್ಯಜೀವಿ ಸಂರಕ್ಷಕರ ಆತಂಕಕ್ಕೆ ಕಾರಣವಾಗಿದೆ.
ಸಚಿವರ ಒತ್ತಡ ?
ಮೈತ್ರಿ ಸರಕಾರದ ಪ್ರಭಾವಿ ಸಚಿವರೊಬ್ಬರು ರಾತ್ರಿ ಸಂಚಾರಕ್ಕೆ ಅನುಮತಿ ನೀಡುವುದಕ್ಕೆ ಆಸಕ್ತರಾಗಿರುವುದೇ ಈ ಎಲ್ಲ ಆತಂಕಕ್ಕೆ ಮೂಲ ಕಾರಣ. ಕೇರಳ ಸಂಚಾರಕ್ಕೆ 'ಉಪಯೋಗ' ಕಲ್ಪಿಸಲು ಈ ಸಚಿವರು ಮುಂದಾಗಿದ್ದಾರೆ. ಇದರಿಂದಾಗಿ ಬಂಡಿಪುರ ಅರಣ್ಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲಿವೇಟೆಡ್ ರಸ್ತೆ ತಲೆ ಎತ್ತುವ ಸಾಧ್ಯತೆ ಹೆಚ್ಚು ಎಂದು 'ಹೆಸರು ಹೇಳಲಿಚ್ಚಿಸದ ' ಅರಣ್ಯಾಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಚಿವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿ ಸಂದರ್ಭದಲ್ಲಿ ಪದೇಪದೆ ರಾತ್ರಿ ಸಂಚಾರ ತೆರವು ವಿಚಾರ ಪ್ರಸ್ತಾಪಿಸಿರುವುದು ಕೇರಳ ಟ್ರಾನ್ಸ್ಪೋರ್ಟ್ ಲಾಬಿಗೆ ರಾಜ್ಯ ಸರಕಾರ ಮಣಿಯುತ್ತಿರುವುದರ ದ್ಯೋತಕ ಎನ್ನಲಾಗುತ್ತಿದೆ.
ಐಎಎಸ್ ಸ್ನೇಹ
ಇದೆಲ್ಲದಕ್ಕಿಂತ ಮಿಗಿಲಾದ 'ಐಎಎಸ್ ಸ್ನೇಹ ಕೂಟ'ದ ಗುಪ್ತ ಪ್ರಯತ್ನವೂ ರಾತ್ರಿ ಸಂಚಾರ ಪುನರಾರಂಭದ ವಿಚಾರದಲ್ಲಿ ಕೆಲಸ ಮಾಡುತ್ತಿದೆ. ಇತ್ತೀಚೆಗಷ್ಟೇ ನಿವೃತ್ತರಾದ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿ ಫಾಲ್ ಅಂಥೋನಿ, ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ಅಡ್ಡಿಯಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿರುವ ಕೇಂದ್ರ ಭೂ ಸಾರಿಗೆ ಇಲಾಖೆ ಕಾರ್ಯದರ್ಶಿ ವೈ.ಎಸ್.ಮಲ್ಲಿಕ್ ರಾತ್ರಿ ಸಂಚಾರ ಪುನಃ ಆರಂಭಿಸುವುದರ ಪರವಾಗಿದ್ದಾರೆ. ರಾಜ್ಯ ಸರಕಾರದ ಅತ್ಯುನ್ನತ ಸ್ಥಾನದಲ್ಲಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಇವರಿಬ್ಬರಿಗೆ 'ಬ್ಯಾಚ್ಮೇಟ್' ಆಗಿದ್ದು, ಸ್ನೇಹಕ್ಕೆ ಕಟ್ಟು ಬಿದ್ದು ದಶಕಗಳಿಂದ ರಾಜ್ಯ ಸರಕಾರ ಕಾಪಾಡಿಕೊಂಡು ಬಂದಿದ್ದ ಬಿಗಿ ನಿಲುವನ್ನು ಕೊಂಚ ಸಡಿಲಿಸಿದ್ದಾರೆ ಎಂಬ ಆರೋಪ ವನ್ಯಜೀವಿ ಸಂರಕ್ಷಕರು ಹಾಗೂ ಅರಣ್ಯ ಇಲಾಖೆಯಲ್ಲಿ ಹರಿದಾಡುತ್ತಿದೆ.
ರಂಗ ಮೃತಪಟ್ಟಿರುವ ಸಂಗತಿಯನ್ನು ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನ್ನಟಿ ಶ್ರೀಧರ್ ಧೃಢಪಡಿಸಿದ್ದು, ನಾಗರಹೊಳೆ ಅಭಯಾರಣ್ಯದಲ್ಲಿ ಸಂಚರಿಸುವ ವಾಹನಗಳಿಗೆ ಕಡ್ಡಾಯವಾಗಿ ವೇಗ ಮಿತಿ ನಿಗದಿಪಡಿಸುವಂತೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಮನವಿ ಮಾಡಿದ್ದೇವೆ ಎಂದು 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
ಕೇರಳದ ಲಾಬಿ ಏಕೆ ?
ಬಂಡಿಪುರ-ಕೇರಳ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ರಾತ್ರಿ ಸಂಚಾರ ಆರಂಭಿಸುವ ವಿಚಾರದಲ್ಲಿ ಕೇರಳ ಸರಕಾರ ಹಿಂದಿನಿಂದಲೂ ಉತ್ಸಾಹ ತೋರುತ್ತಿದೆ. ಇದಕ್ಕೆ ಕಾರಣ 'ಟ್ರಾನ್ಸ್ಪೋರ್ಟ್ ಲಾಬಿ'. ಅಲ್ಲಿನ ಬಸ್ ಮಾಲೀಕರೇ ಈ ಬಗ್ಗೆ ಹೆಚ್ಚು ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಿದರೆ ಖಾಸಗಿ ಬಸ್ಗಳಲ್ಲಿ ಲಗೇಜ್ ಸಾಗಿಸುವುದಕ್ಕೆ ಅವಕಾಶ ದೊರೆಯುತ್ತದೆ. ಪರ್ಮಿಟ್ ಇಲ್ಲದೇ ವಾಹನ ಸಂಚಾರಕ್ಕೂ ಅನುಕೂಲವಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಕರ್ನಾಟಕ ಸಂಪರ್ಕಕ್ಕೆ ಇದು ಹತ್ತಿರದ ಮಾರ್ಗವಾಗಿದೆ. 2010ರಿಂದಲೂ ಕೇರಳ ಸರಕಾರ ರಾತ್ರಿ ಸಂಚಾರ ಪುನರಾರಂಭಕ್ಕೆ ಒತ್ತಡ ಹೇರುತ್ತಲೇ ಇದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಅಕ್ರಮ ಮರಳು ಹಾಗೂ ಕಲ್ಲುಗಣಿಗಾರಿಕೆ ನಡೆಸುವವರು ಇದರ ಪರವಾಗಿದ್ದಾರೆ. ಕೇರಳದಲ್ಲಿ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮರಳಿಗಾಗಿ ಕರ್ನಾಟಕವನ್ನು ನೆಚ್ಚಿಕೊಳ್ಳಲಾಗಿದ್ದು, 'ಕಳ್ಳಮಾರ್ಗ'ದಲ್ಲಿ ಮರಳು ಹಾಗೂ ಕಲ್ಲು ಸಾಗಿಸುವುದಕ್ಕೆ ಬಂಡಿಪುರ ಹೆದ್ದಾರಿ ಅತ್ಯಂತ ಪ್ರಶಸ್ತ. ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ನೀಡಿದರೆ ಈ ಎಲ್ಲ ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ.
ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನಗಳ ಸಂಚಾರ ನಿಷೇಧವನ್ನು ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ರಾಜ್ಯ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ, ಅದೇ ನಿಲುವು ಮುಂದುವರಿಯಲಿದೆ. ಈಗಿನ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
-ಆರ್.ಶಂಕರ್, ಅರಣ್ಯ ಸಚಿವ
ರಾತ್ರಿ ಸಂಚಾರ ನಿಷೇಧಿಸುವುದು ಹಾಗೂ ಎಲಿವೇಟೆಡ್ ರಸ್ತೆ ನಿರ್ಮಿಸುವ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ಇದರಿಂದಾಗುವ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸುಪ್ರೀಂ ಕೋರ್ಟ್ನಲ್ಲಿ ನಮ್ಮ ಹೋರಾಟ ಮುಂದುವರಿಸುತ್ತೇವೆ.
Share your comments