ಬಂಗಾಳಕೊಲ್ಲಿಯಲ್ಲಿ ಬೀಸಿದ ಮೈಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನವೆಂಬರ್ 18 ರಿಂದ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಮಂಡ್ಯ, ಕೋಲಾರ, ಕೊಡಗು, ರಾಮನಗರ ಮತ್ತು ತುಮಕೂರ ಜಿಲ್ಲೆಗಳ ಕೆಲವು ಕಡೆ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ.
ದೀಪಾವಳಿ ಸಂಭ್ರಮ ತಗ್ಗಿಸಿದ ಮಳೆ:
ಬೆಂಗಳೂರು ನಗರದ ಹಲವೆಡೆ ಭಾನುವಾರ ಸಂಜೆ ಜೋರು ಮಳೆಯಾಗಿದ್ದು, ಹಲವು ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ನಗರದಲ್ಲಿ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಇದೆ. ಭಾನುವಾರವೂ ಬೆಳಿಗ್ಗೆಯಿಂದ ಹಲವೆಡೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ವೇಳೆ ಕೆಲವೆಡೆ ಮಾತ್ರ ಜಿಟಿ ಜಿಟಿ ಮಳೆಯಾಗಿತ್ತು. ಸಂಜೆ ವೇಳೆ ಮಳೆ ಜೋರಾಗಿ ಸುರಿಯಿತು.
ಆರ್.ಟಿ.ನಗರ, ಸಂಜಯನಗರ, ಹೆಬ್ಬಾಳ, ಅಮೃತಹಳ್ಳಿ, ಸದಾಶಿವನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಿತ್ತು. ಪೀಣ್ಯ, ಯಶವಂತಪುರ, ಮಲ್ಲೇಶ್ವರ, ಬಸವೇಶ್ವರನಗರ, ರಾಜಾಜಿನಗರ, ವಿಜಯನಗರ, ಯಶವಂತಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆ ಆಯಿತು.
ಪಟಾಕಿ ಸಿಡಿಸಸಲು ಅಡ್ಡಿ
ದೀಪಾವಳಿ ಅಂಗವಾಗಿ ಸಂಜೆ ವೇಳೆ ದೀಪಗಳನ್ನು ಹಚ್ಚಿ ಪಟಾಕಿ ಸಿಡಿಸಬೇಕೆಂದುಕೊಂಡಿದ್ದ ಮಕ್ಕಳಿಗೆ ಮಳೆ ಅಡ್ಡಿ ಉಂಟುಮಾಡಿತು. ವಿವಿಧ ಮೈದಾನಗಳಲ್ಲಿ ಪಟಾಕಿ ಮಾರಾಟ ಮಳಿಗೆಗಳ ವ್ಯಾಪಾರಕ್ಕೂ ಮಳೆ ಅಡ್ಡಿ ಉಂಟು ಮಾಡಿತು.
Share your comments