ಕಾವೇರಿ ಕೂಗು ಅಭಿಯಾನದ ಭಾಗವಾಗಿ ನವೆಂಬರ್ ತಿಂಗಳವರೆಗೆ ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಕೊಳ್ಳದ ಪ್ರದೇಶದಲ್ಲಿ 1.10 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಈಶ ಫೌಂಡೇಷನ್‌ನ ಮುಖ್ಯಸ್ಥರಾದ (Isha foundation) ಸದ್ಗುರು ಜಗ್ಗಿ ವಾಸುದೇವ್ (Jaggi vasudev) ತಿಳಿಸಿದರು.
ಅವರು ಶನಿವಾರ ಸಾಯಂಕಾಲ ವೆಬಿನಾರ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ ಸೋಂಕಿನ ಭಯದಿಂದ ಅಭಿಯಾನದ ವೇಗಕ್ಕೆ ಅಲ್ಪ ಹಿನ್ನೆಡೆಯಾಗಿರಬಹುದು ಆದರೂ ಸಹ ನಿರೀಕ್ಷೆಗಿಂತ ಹೆಚ್ಚು ಸ್ಪಂದನೆ ಸಿಕ್ಕಿದೆ. ಸರ್ಕಾರೇತರ ಸಂಸ್ಥೆಗಳು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಸುತ್ತೂರು ಮಠದ ಸ್ವಾಮಿಜಿ, ಎಫ್.ಪಿಓ, ಎನ್.ಜಿಓ ಹಾಗೂ, ಸಂಘಸಂಸ್ಥೆಗಳು, ರೈತಸಂಘಟನೆಗಳು, ಸಾರ್ವಜನಿಕರ ಸಹಕಾರದೊಂದಿಗೆ ಕಾವೇರಿ ನದಿ ಪಾತ್ರದಲ್ಲಿ ಕೈಗೊಂಡಿರುವ ಕಾವೇರಿ ಕೂಗು ಅಭಿಯಾನಕ್ಕೆ ದೇಶಾದ್ಯಂತ ಉತ್ತಮ ಸ್ಪಂದನೆ ಸಿಗುತ್ತಿದೆ. ಎಲ್ಲರ ಸಹಕಾರದಿಂದಲೇ ಕರ್ನಾಟಕದಲ್ಲಿ 50 ಲಕ್ಷ ಮತ್ತು ತಮಿಳುನಾಡಿನಲ್ಲಿ 11 ಲಕ್ಷ ಸಸಿಗಳನ್ನು ಈಗಾಗಲೇ ರೈತರಿಗೆ ವಿತರಿಸಲಾಗಿದೆ. ಕರ್ನಾಟಕದಲ್ಲೇ ಈ ವರ್ಷ 72 ಲಕ್ಷ ಸಸಿಗಳನ್ನು ವಿತರಿಸುವ ಗುರಿ ಇದೆ ಎಂದರು.
2 ಕೋಟಿಗೂ ಹೆಚ್ಚು ಸಸಿ ವಿತರಣೆ ಗುರಿ ಇತ್ತು. ಲಾಕ್‌ಡೌನ್ (Lockdown) ಕಾರಣದಿಂದ ಬೇಡಿಕೆ ಕಡಿಮೆಯಾಗಲಿದೆ ಎಂದು ಭಾವಿಸಿದೆವು. ಆದರೆ ಬೇಡಿಕೆ ಕಡಿಮೆಯಾಗಿಲ್ಲ. ರೈತರು (Farmers) ಸಲ್ಲಿಸಿರುವ ಬೇಡಿಕೆಗೆ ತಕ್ಕಂತೆ ಸಸಿ ವಿತರಣೆ ಮಾಡಲು ಈ ವರ್ಷ ಸಾಧ್ಯವಾಗುತ್ತಿಲ್ಲ ಎಂದರು.
ಮರ ವ್ಯವಸಾಯ ಪದ್ಧತಿ (Agro forestry) ಅನುಸರಿಸುವವರಿಗೆ ನಾಲ್ಕನೇ ವರ್ಷದಿಂದ ಆದಾಯ ಶುರುವಾಗುತ್ತದೆ. ಮರ ಕಟಾವಿಗೆ ಅನುಮತಿ ಪಡೆಯಲು ರೈತರು ವಿವಿಧ ಇಲಾಖೆಗಳಿಗೆ ಸುತ್ತಬೇಕಿದೆ. ಮರ ಕಟಾವು ಮಾಡಿದ ನಂತರ ದೇಶದ ಯಾವುದೇ ಮೂಲೆಯಲ್ಲಿ ಮಾರಾಟ ಮಾಡಲು ಅಧಿಕಾರಿಗಳು ಅಡಚಣೆ ನೀಡುತ್ತಿದ್ದರಿಂದ ಇದನ್ನು ಡಿಜಿಟಲ್ ರೂಪ ಕೊಡಲು ಪ್ರಯತ್ನ ನಡೆದಿದೆ. ಅತೀ ಶೀಘ್ರದಲ್ಲಿ ಮರ ಕಟಾವು ಮಾಡಿದ ನಂತರ ಮಾರಾಟಕ್ಕೆ ಹೊಸ ಡಿಜಿಟಲ್ ರೂಪ ಸಿಗಲಿದೆ. ಈ ಪ್ರಕ್ರಿಯೆ ಸರಳಗೊಳಿಸಲು ಕೇಂದ್ರ ಆನ್‌ಲೈನ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ. ಇದು ಜಾರಿಯಾದರೆ ಮರ ವ್ಯವಸಾಯ ಇನ್ನಷ್ಟು ಹೆಚ್ಚಲಿದೆ ಎಂದರು.
ರೈತರಿಗೆ ಮೊದಲು ಗಿಡ ಸಂರಕ್ಷಿಸಲು ನಾಲ್ಕು ವರ್ಷದಲ್ಲಿ 100 ರೂಪಾಯಿ ಪ್ರೋತ್ಸಾಹ ಧನ ಕೊಡಲಾಗುತ್ತಿತ್ತು.ಈಗ ಅದನ್ನು 125 ರೂಪಾಯಿಗೆ ಏರಿಸಲಾಗಿದೆ. ಇದರಿಂದ ರೈತರಿಗೆ ಲಾಭವಾಗಲಿದೆ. ಮರ ವ್ಯವಸಾಯ ಪದ್ಧತಿಯಿಂದ ರೈತರು ಅಂತರ ಬೆಳೆ ಹಾಕಿ ಲಾಭ ಪಡೆದುಕೊಳ್ಳಬಹುದು.ಕೊರೋನಾ ಲಾಕ್ಡೌನ್ ನಂತರ ನಗರಪ್ರದೇಶಗಳಿಗೆ ವಲಸೆ ಹೋಗಿರುವ ಕಾರ್ಮಿಕರು, ಯುವಕರು ಹಳ್ಳಿಗಳತ್ತ ವಲಸೆ ಆರಂಭಿಸಿದ್ದಾರೆ. ಕೆಲಸವಿಲ್ಲವೆಂದು ಎದೆಗುಂದಬಾರದು. ಕೃಷಿ ಜೊತೆಗೆ ಮರ ವ್ಯವಸಾಯದಲ್ಲಿ ತೊಡಗಿಕೊಂಡು ಉತ್ತಮ ಆದಾಯ ಗಳಿಸಬಹುದು. ಮರಗಳನ್ನು ಬೆಳೆಸೆ ಅಂತರ ಬೆಳೆ ಹಾಕಿ ಲಾಭ ಮಾಡಿಕೊಳ್ಳಬಹುದು ಎಂದು ಮನವಿ ಮಾಡಿದರು.
‘ಕಾವೇರಿ ಕೂಗು ಯೋಜನೆಯು ಕಾವೇರಿ ಜಲಾನಯನ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶ ಕೂಡ ಇದರಲ್ಲಿ ಸೇರಿದೆ. ನೆರೆ ಹಾವಳಿಗೆ ಅತಿಯಾದ ಮಳೆ ಕಾರಣವಲ್ಲ. ಹಿಂದೆ ವರ್ಷಕ್ಕೆ 80ರಿಂದ 100 ದಿನ ಮಳೆಯಾಗುತ್ತಿತ್ತು. ಈಗ 40ರಿಂದ 80 ದಿನಗಳಿಗೆ ಇಳಿದಿದೆ. ಒಂದು ಅಥವಾ ಎರಡು ದಿನಗಳಲ್ಲೇ ಹೆಚ್ಚು ಮಳೆ ಸುರಿಯುತ್ತಿದೆ. ನಿರ್ವಹಿಸಲು ಆಗದಷ್ಟು ಕೆರೆ, ಕಟ್ಟೆ, ಜಲಾಶಯ ಇಲ್ಲದ ಕಾರಣ ನೆರೆ ಎಂದು ಭಾಸವಾಗುತ್ತಿದೆ ಎಂದರು.
Share your comments