ಕೃಷಿಕರು, ಕೃಷಿ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ವಿಜ್ಞಾನಿಗಳು ಇನ್ನು ಮುಂದೆ ದೂರವಾಣಿ, ಮೊಬೈಲ್ ಕರೆಯನ್ನು ಸ್ವೀಕರಿಸಿದ ತಕ್ಷಣ ಬರುವ ಮೊದಲ ಪದ ಹಲೋ ಬದಲು ಜೈ ಕಿಸಾನ್ ಆಗಬೇಕು ಎಂದು ಕರ್ನಾಟಕ ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಆಶಯ ವ್ಯಕ್ತಪಡಿಸಿದ್ದಾರೆ.
ಅವರು ಜಿಕೆವಿಕೆಯಲ್ಲಿ ಮಾತನಾಡಿದ ಕೃಷಿ ಸಚಿವರು, ಯಾರೇ ಕರೆ ಮಾಡಲಿ ಮೊದಲು ನಾವು ಬಳುವುದು ಹಲೋ ಎಂಬ ಶಬ್ದ. ಇನ್ನೂ ಮುಂದೆ ಹಲೋ ಎನ್ನುವುದರ ಬದಲು ಜೈ ಕಿಸಾನ್ ಎಂದು ಹೇಳಬೇಕು. ಇದರಿಂದ ಕೃಷಿಕ, ದೇಶಕ್ಕೆ ಅನ್ನ ನೀಡುವ ರೈತನಿಗೆ ಗೌರವ ಕೊಟ್ಟಂತಾಗುತ್ತದೆ. ಸಾಮಾಜಿಕ ಆಂದೋಲನವಾಗಿ ಅನ್ನದಾತನ ಶಕ್ತಿ ಜಗತ್ತಿಗೆ ತಿಳಿಯಬೇಕು ಎಂದರು.
ಯಾವುದೇ ಇಲಾಖೆಯಾದರೂ, ಪ್ರಪಂಚ ಯಾವುದೇ ರಂಗದಲ್ಲಾದರೂ ಅಭಿವೃದ್ಧಿಹೊಂದಿದರೂ ಸಹ ಜಗತ್ತಿಗೆ ಅನ್ನ ನೀಡುವ ರೈತನ ಮುಂದೆ ತಲೆಬಾಗಬೇಕು . ಅನ್ನವಿಲ್ಲದೆ ಬದುಕುವುದು ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಅಧಿಕಾರಿಗಳು ಮತ್ತು ವಿಜ್ಞಾನಿಗಳು ಕೃಷಿಕರಿಗೆ ಹತ್ತಿರವಾಗಿ ನೂತನ ತಂತ್ರಜ್ಞಾನಗಳನ್ನು ರೈತರು ಅನುಸರಿಸಿ ಶ್ರಮ ಕಡಿತಗೊಳಿಸಿ ಹೆಚ್ಚಿನ ಇಳುವರಿ ಪಡೆಯಲು ಪ್ರೇರೇಪಿಸಬೇಕು. ರೈತರು ಒಂದೇ ಬೆಳೆಯನ್ನು ಬೆಳೆಯುವ ಬದಲು ಬಹು ಬೆಳೆಗಳನ್ನು ಬೆಳೆದು ಲಾಭಗಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಖಾಸಗಿ ಕಂಪೆನಿಯವರು ತಮ್ಮ ನೂತನ ತಳಿಗಳು ಮತ್ತು ತಂತ್ರಜ್ಞಾನಗಳಿಗೆ ವ್ಯಾಪಕ ಪ್ರಚಾರ ನೀಡುವಂತೆ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳೂ ಸಹ ವ್ಯಾಪಕ ಪ್ರಚಾರ ನೀಡಿ ತಂತ್ರಜ್ಞಾನಗಳು ಶೀಘ್ರವಾಗಿ ರೈತರ ಮನೆಬಾಗಿಲಿಗೆ ತಲುಪಿಸಲು ಶ್ರಮವಹಿಸಬೇಕು ಎಂದರು.
Share your comments