ಸೊನ್ನ ಬ್ಯಾರೇಜಿನ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೊನ್ನ ಬ್ಯಾರೇಜಿನಲ್ಲಿ ಒಳಹರಿವು ಹೆಚ್ಚಳವಾಗುತ್ತಿದೆ ಎಂದು ಕೆ.ಎನ್.ಎನ್.ಎಲ್. ಭೀಮಾ ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತ ಅಶೋಕ ಆರ್. ಕಲಾಲ್ ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮಹಾರಾಷ್ಟ್ರದ ಉಜನಿ ಮತ್ತು ವೀರ್ ಡ್ಯಾಂದಿಂದ ಕ್ರಮವಾಗಿ 23000 ಮತ್ತು 5100 ಕ್ಯುಸೆಕ್ ನೀರು ಬಿಡುಗಡೆ ಹಾಗೂ ಬ್ಯಾರೇಜಿನ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ಮಂಗಳವಾರ ಸಾಯಂಕಾಲ 65,000 ಕ್ಯುಸೆಕ್ ನೀರು ಒಳಹರಿವು ಹೆಚ್ಚಾಗಿ ಬ್ಯಾರೇಜ್ ಭರ್ತಿಯಾಗಿದೆ. ಬ್ಯಾರೇಜಿನ ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಮತ್ತು ವೀರ್ ಮತ್ತು ಉಜನಿ ಡ್ಯಾಂನಿಂದ ಹೆಚ್ಚಿನ ನೀರು ಬಿಡುವ ಸಾಧ್ಯತೆ ಇರುವುದರಿಂದ ಮಂಗಳವಾರ 65000 ಕ್ಯುಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೊನ್ನ ಬ್ಯಾರೇಜಿನ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೊನ್ನ ಬ್ಯಾರೇಜಿನಲ್ಲಿ ಒಳಹರಿವು ಹೆಚ್ಚಳವಾಗುತ್ತಿದೆ. ಮುಂದೆಯೂ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದ್ದು, ಒಳಹರಿವಿನಷ್ಟೆ ಪ್ರಮಾಣದ ನೀರು ಭೀಮಾನದಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಠಪಡಿಸಿದ್ದಾರೆ.
ಆದ್ದರಿಂದ ಸೊನ್ನ ಬ್ಯಾರೇಜ್ ಕೆಳಭಾಗದಲ್ಲಿರುವ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಕಲಬುರಗಿ ತಾಲೂಕುಗಳು ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬ್ಯಾರೇಜ್ ಕೆಳಗಡೆ ಬರುವ ಭೀಮಾ ನದಿಯ ದಡದಲ್ಲಿರುವ ಗ್ರಾಮಗಳ ರೈತರು ನದಿಯ ದಡಕ್ಕೆ ಹೋಗಬಾರದು. ಅಲ್ಲದೆ ತಮ್ಮ ಜಾನುವಾರುಗಳನ್ನು ನದಿಯ ದಡಕ್ಕೆ ಬಿಡದಂತೆ ಎಚ್ಚರ ವಹಿಸಬೇಕು. ಅದೇ ರೀತಿ ಸೊನ್ನ ಬ್ಯಾರೇಜಿನ ಕೆಳಗಡೆ ಬರುವ ಇನ್ನಿತರ ಬ್ಯಾರೇಜ್‍ಗಳ ಅಧಿಕಾರಿಗಳು ಎಚ್ಚರವಹಿಸಲು ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share your comments