ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗಳು ಜೂನ್ 21ರಿಂದ ಜುಲೈ 5ರವರೆಗೆ ನಡೆಯಲಿವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನಾದಿಂದಾಗಿ ಈ ವರ್ಷ ಪರೀಕ್ಷೆಗಳ ದಿನಾಂಕ ಸ್ವಲ್ಪ ವ್ಯತ್ಯಾಸವಾಗಿದೆ. ‘ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಗಣಿಸಿ, ಪ್ರಮುಖ ವಿಷಯಗಳ ಪರೀಕ್ಷೆಗೆ ಕನಿಷ್ಠ ಒಂದು ದಿನ ವಿರಾಮ ಸಿಗುವಂತೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ’ ಎಂದರು.
ಜೂನ್ 21ರಂದು ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ, ಜೂನ್ 24-ಗಣಿತ, ಜೂನ್ 28-ವಿಜ್ಞಾನ, ಜೂನ್ 30-ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಜುಲೈ2- ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ, ಜುಲೈ 5- ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.
ಐಸಿಎಸ್ಇ ಪರೀಕ್ಷೆ ದಿನಾಂಕ ಪ್ರಕಟ
ಇಂಡಿಯನ್ ಸರ್ಟಿಫಿಕೆಟ್ ಆಫ್ ಸೆಕಂಡರಿ ಎಜುಕೇಶನ್ (ಐಸಿಎಸ್ಇ) 10 ಮತ್ತು 12ನೇ ತರಗತಿಗಳ ಪರೀಕ್ಷಾ ದಿನಾಂಕ ಪ್ರಕಟಿಸಿದ್ದು, 12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 8ರಿಂದ ಹಾಗೂ 10ನೇ ತರಗತಿ ಪರೀಕ್ಷೆಗಳು ಮೇ 5ರಿಂದ ಆರಂಭವಾಗಲಿವೆ.
‘10ನೇ ತರಗತಿ ಬೋರ್ಡ್ ಪರೀಕ್ಷೆಗಳು ಮೇ 5ರಿಂದ ಜೂನ್ 7ರವರೆಗೆ ನಡೆಯಲಿವೆ. ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ (ಐಎಸ್ಸಿ) 12ನೇ ತರಗತಿಗೆ ಏಪ್ರಿಲ್ 8ರಿಂದ ಜೂನ್ 16ರವರೆಗೆ ಪರೀಕ್ಷೆ ನಡೆಸಲಿದೆ’ ಎಂದು ಸಿಐಸಿಎಸ್ಇ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರಾಥೂನ್ ತಿಳಿಸಿದ್ದಾರೆ.
ಏಪ್ರಿಲ್ 8ರಂದು 12ನೇ ತರಗತಿಗೆ ಕಂಪ್ಯೂಟರ್ ಸೈನ್ಸ್ ಪರೀಕ್ಷೆ (ಪ್ರಾಯೋಗಿಕ) ನಡೆಯಲಿದ್ದು, ಪರೀಕ್ಷಾ ಅವಧಿ 3 ಗಂಟೆಯ ಬದಲಿಗೆ 90 ನಿಮಿಷಗಳಿಗೆ ನಿಗದಿಪಡಿಸಲಾಗಿದೆ. ಉಳಿದ ವಿಷಯಗಳ ಪರೀಕ್ಷೆಗಳು ಏ.9ರಿಂದ ನಡೆಯಲಿವೆ.
Share your comments