ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಯೋಜನೆ ಕೈಬಿಟ್ಟ ಸರ್ಕಾರ ಇದೀಗ ಲ್ಯಾಪ್ ಟಾಪ್ ಬದಲು ಟ್ಯಾಬ್ಲೆಟ್ ನೀಡಲು ತೀರ್ಮಾನಿಸಿದೆ.
ಪ್ರತಿವರ್ಷ ಸರ್ಕಾರಿ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡುತ್ತಿತ್ತು. ಆದರೆ ಇದರ ಖರೀದಿಯಲ್ಲಿ ಅಕ್ರಮ ನಡೆಯಿದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಟ್ಯಾಬ್ಲೆಟ್ ನೀಡಲು ನಿರ್ಧರಿಸಲಾಗಿದೆ.
2019–20ನೇ ಸಾಲಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಥಮ ವರ್ಷ ಪದವಿಯ ಅಂದಾಜು 1.10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡಿತ್ತು.
ಪ್ರಸಕ್ತ ವರ್ಷ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಥಮ, ಸರ್ಕಾರಿ ಪಾಲಿಟೆಕ್ನಿಕ್‌ಗಳ ಪ್ರಥಮ ಮತ್ತು ದ್ವಿತೀಯ ಹಾಗೂ ಸರ್ಕಾರಿ ಎಂಜಿನಿಯ ರಿಂಗ್ ಕಾಲೇಜುಗಳ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷ ಸೇರಿ ಒಟ್ಟು 1,55,396 ವಿದ್ಯಾರ್ಥಿಗಳಿಗೆ ‘ಡಿಜಿಟಲ್ ಕಲಿಕೆ’ ಯೋಜನೆಯ ಭಾಗವಾಗಿ ಅಂದಾಜು 155.40 ಕೋಟಿ ವೆಚ್ಚದಲ್ಲಿ ತಲಾ 10 ಸಾವಿರ ಮೌಲ್ಯದ ಟ್ಯಾಬ್ಲೆಟ್ ಉಚಿತವಾಗಿ ಸಿಗಲಿದೆ.
ಉನ್ನತ ಶಿಕ್ಷಣ ಇಲಾಖೆಯ ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆ ಸಹಮತ ಸೂಚಿಸಿದೆ. ಮುಂಬರುವ ಜನವರಿ ತಿಂಗಳಲ್ಲಿ ಕನಿಷ್ಠ ಅರ್ಹ ಬಿಡ್‌ದಾರರಿಗೆ ನಿಯಮಾನುಸಾರ ಟ್ಯಾಬ್ಲೆಟ್ ಖರೀದಿಸಿ ಪೂರೈಸಲು ಕಾರ್ಯಾದೇಶ ನೀಡಲು ಉದ್ದೇಶಿಸಲಾಗಿದೆ. ಅದೇ ತಿಂಗಳಿನಲ್ಲಿಯೇ ಎಲ್ಲ ಅರ್ಹ ಫಲಾನು ಭವಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ನೀಡುವುದರಿಂದ ಡಿಜಿಟಲ್ ಕಲಿಕೆ ಮತ್ತು ಆನ್‌ಲೈನ್ ಕಲಿಕೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ಸಾಮಾಜಿಕವಾಗಿ ಕೆಳಸ್ತರಕ್ಕೆ ಸೇರಿದವರಾಗಿದ್ದಾರೆ. ಟ್ಯಾಬ್ಲೆಟ್‌ಗಳಲ್ಲಿ ವೈಫೈ ಮತ್ತು ಸಿಮ್ ಬಳಕೆಯಿಂದ ಇಂಟರ್‌ನೆಟ್ ಸಂಪರ್ಕ ಸಾಧಿಸಬಹುದು. ಜೊತೆಗೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ನಡುವೆ ಇರುವ ಡಿಜಿಟಲ್ ತಂತ್ರಜ್ಞಾನದ ಅರಿವಿನ ಅಂತರ (ಡಿಜಿಟಲ್–ಡಿವೈಡ್) ತೊಡೆದು ಹಾಕುವ ಉದ್ದೇಶ ಹೊಂದಲಾಗಿದೆ ಎಂದೂ ಇಲಾಖೆಯ ಮೂಲಗಳು ಸಮರ್ಥನೆ ನೀಡಿವೆ.
Share your comments