1. ಸುದ್ದಿಗಳು

ನಿಲ್ಲದ ‘ಮೀ ಟೂ’ ಬಿರುಗಾಳಿ, ಆರೋಪ -ಪ್ರತ್ಯಾರೋಪಗಳ ಸುರಿಮಳೆ

#Metoo

ಹೊಸದಿಲ್ಲಿ: ದೇಶಾದ್ಯಂತ ವಿವಾದ ಬಿರುಗಾಳಿ ಎಬ್ಬಿಸಿರುವ 'ಮೀ ಟೂ' ಅಭಿಯಾನವು ಹೊಸ ಆರೋಪಗಳ ಸೇರ್ಪಡೆಯೊಂದಿಗೆ ಮತ್ತಷ್ಟು ತೀವ್ರಗೊಂಡಿದೆ. ಖ್ಯಾತ ಗಾಯಕರಾದ ರಘು ದೀಕ್ಷಿತ್‌ ವಿರುದ್ಧ ಆರೋಪದೊಂದಿಗೆ ಸ್ಯಾಂಡಲ್‌ವುಡ್‌ಗೂ ಈ ಕಿಡಿ ಹೊತ್ತಿಕೊಂಡಿದೆ.

ಮತ್ತೊಂದೆಡೆ, ಈ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ. ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಎಂ.ಜೆ. ಅಕ್ಬರ್‌ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಡ ಹೆಚ್ಚಿಸಿವೆ.

ಕೇಂದ್ರ ಸಚಿವರ ವಿರುದ್ಧ ಆರೋಪ ಕೇಳಿಬಂದರೂ, ಬಿಜೆಪಿ ಮೌನವಾಗಿರುವುದು ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ. ಇದರ ನಡುವೆ ಎಂ.ಜೆ. ಅಕ್ಬರ್‌ ಅವರು ಪತ್ರಿಕೆಯೊಂದರ ಸಂಪಾದಕರಾಗಿದ್ದಾಗ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮತ್ತೊಬ್ಬ ಮಹಿಳೆ ಬುಧವಾರ ಆರೋಪ ಮಾಡಿರುವುದು ವಿವಾದದ ಬಿಸಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

''ಎಂ.ಜೆ. ಅಕ್ಬರ್‌ ಅವರು ತೃಪ್ತಿಕರ ವಿವರಣೆ ನೀಡಬೇಕು ಇಲ್ಲವೇ, ರಾಜೀನಾಮೆ ನೀಡಬೇಕು. ಅವರ ಜತೆ ಕೆಲಸ ಮಾಡಿದ ಹಿರಿಯ ಪತ್ರಕರ್ತೆಯರೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳ ಬಗ್ಗೆ ತನಿಖೆಯೂ ನಡೆಯಬೇಕು,''ಎಂದು ಕಾಂಗ್ರೆಸ್‌ ವಕ್ತಾರ ಎಸ್‌. ಜೈಪಾಲ್‌ ರೆಡ್ಡಿ ಆಗ್ರಹಿಸಿದ್ದಾರೆ.


ಈ ಮಧ್ಯೆ, ಪ್ರಕರಣದ ಬಗೆಗಿನ ಪ್ರಶ್ನೆಗಳಿಂದ ನುಣುಚಿಕೊಂಡ ಸಚಿವೆ ಸುಷ್ಮಾ ಸ್ವರಾಜ್‌ ವಿರುದ್ಧವೂ ರೆಡ್ಡಿ ಕಿಡಿಕಾರಿದ್ದಾರೆ.

ಓವೈಸಿ ಆಕ್ರೋಶ: ಈ ಮಧ್ಯೆ, ಎಐಎಂಐಎಂ ಪಕ್ಷದ ವರಿಷ್ಠ, ಸಂಸದ ಓವೈಸಿ ಕೂಡಾ ಅಕ್ಬರ್‌ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಮೀ ಟೂ ಸುಳಿಯಲ್ಲಿ ರಘು ದೀಕ್ಷಿತ್‌
ರಾಜ್ಯ ಮೂಲದ ಗಾಯಕ ರಘು ದೀಕ್ಷಿತ್‌ ಹೆಸರು ಬಹಿರಂಗಪಡಿಸದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಗಾಯಕ ಚಿನ್ಮಯಿ ಶ್ರೀಪಾದ ಅವರ ಟ್ವಿಟರ್‌ ಖಾತೆ ಮೂಲಕ ಈ ಆರೋಪ ಮಾಡಲಾಗಿದೆ. ಹಲವು ವರ್ಷಗಳ ಹಿಂದೆ ತಮ್ಮನ್ನು ಸ್ಟುಡಿಯೋಗೆ ಕರೆಸಿಕೊಂಡು ದೀಕ್ಷಿತ್‌ ಅಸಭ್ಯವಾಗಿ ವರ್ತಿಸಿದರು. ನನ್ನ ಚೆಕ್‌ಗೆ ಸಹಿ ಹಾಕುವಾಗ ಹತ್ತಿರಕ್ಕೆ ಎಳೆದುಕೊಂಡು ಮುತ್ತು ಕೊಡುವಂತೆ ಕೇಳಿದರು. ನಂತರ ನನ್ನನ್ನು ಎತ್ತಿಕೊಳ್ಳಲು ಯತ್ನಿಸಿದರು. ಆದರೆ ನಾನು ಅಳುತ್ತಾ ಓಡಿಹೋದೆ. ಅವರ ಪತ್ನಿ ಬಗ್ಗೆಯೂ ರಘು ಕೀಳಾಗಿ ಮಾತನಾಡಿದರು,'' ಎಂದು ಮಹಿಳೆ ಆರೋಪಿಸಿದ್ದಾರೆ.

ಹೊಸ ಬೆಳವಣಿಗೆಗಳು

*ಗಾಯಕ ಕೈಲಾಶ್‌ ಖೇರ್‌ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮತ್ತೊಬ್ಬ ಗಾಯಕಿ ಸೋನಾ ಮಹಾಪಾತ್ರ ಆರೋಪಿಸಿದ್ದಾರೆ. ಢಾಕಾದಲ್ಲಿ ನಡೆಯಬೇಕಿದ್ದ ಸಂಗೀತಗೋಷ್ಠಿ ಸಂಬಂಧ ಚರ್ಚೆಗಾಗಿ ಹೋಟೆಲ್‌ವೊಂದಕ್ಕೆ ಕರೆಸಿಕೊಂಡು ಕಿರುಕುಳ ನೀಡಿದ್ದರು. ಸಂಗೀತ ಗೋಷ್ಠಿ ವೇಳೆಯೂ ಅಸಭ್ಯವಾಗಿ ವರ್ತಿಸಿದರು ಎಂದು ಅವರು ಆರೋಪಿಸಿದ್ದಾರೆ.

* ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್‌ ರಣತುಂಗ ವಿರುದ್ಧ ಭಾರತದ ಮಾಜಿ ಗಗನ ಸಖಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಮುಂಬಯಿನ ಹೋಟೆಲೊಂದರಲ್ಲಿ ತಮ್ಮ ಮೇಲೆ ರಣತುಂಗ ಅವರಿಂದ ದೌರ್ಜನ್ಯ ನಡೆಯಿತು ಎಂದಿದ್ದಾರೆ.

* 'ಸಂಸ್ಕಾರಿ' ಖ್ಯಾತಿಯ ನಟ ಅಲೋಕ್‌ ನಾಥ್‌ ವಿರುದ್ಧ ಸಂಧ್ಯಾ ಮೃದುಲ ಎಂಬ ಮತ್ತೊಬ್ಬ ಮಹಿಳೆಯಿಂದ ಲೈಂಗಿಕ ಕಿರುಕುಳ ಆಪಾದನೆ, ಟೆಲಿಫಿಲಂ ಶೂಟಿಂಗ್‌ ವೇಳೆ ಕೃತ್ಯ ನಡೆದ ಆರೋಪ.

* ನಟ ನಾನಾ ಪಾಟೇಕರ್‌ ವಿರುದ್ಧ ದಾಖಲಿಸಿರುವ ದೂರಿಗೆ ಪೂರಕವಾಗಿ ನಟಿ ತನುಶ್ರೀ ದತ್ತಾ ಅವರಿಂದ ಮುಂಬಯಿ ಪೊಲೀಸರು ಮತ್ತು ಮಹಿಳಾ ಆಯೋಗಕ್ಕೆ 40 ಪುಟಗಳ ದಾಖಲೆ ಸಲ್ಲಿಕೆ.

* ವಿಕಾಸ್‌ ಭಾಲ್‌ ಅವರಿಂದ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಅನುರಾಗ್‌ ಕಶ್ಯಪ್‌ ಮತ್ತು ವಿಕ್ರಮಾದಿತ್ಯ ಮೊಟ್ವಾನೆಗೆ ನೋಟಿಸ್‌; ಅಲೋಕ್‌ ನಾಥ್‌ ಅವರಿಂದಲೂ ನಿರ್ಮಾಪಕಿ ವಿಂತಾ ನಂದಾಗೆ ನೋಟಿಸ್‌.

*ಲೈಂಗಿಕ ಕಿರುಕುಳ ಆರೋಪ ನಿರಾಕರಿಸಿದ ಚಿತ್ರ ಸಾಹಿತಿ ವೈರಮುತ್ತು; ಹೇಳಿಕೆಯನ್ನು 'ಸುಳ್ಳು' ಎಂದ ಗಾಯಕಿ ಶ್ರೀಪಾದ.

* ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗದ, ವಯಸ್ಸು ಮೀರಿದ ಮಹಿಳೆಯರಷ್ಟೇ ಇಂತಹ ವ್ಯರ್ಥ ಆಲಾಪ ಮಾಡುತ್ತಾರೆಂದು ಗಾಯಕ ಅಭಿಜಿತ್‌ ಭಟಾಚಾರ್ಯ ತಿರುಗೇಟು.

ಕೇವಲ ಆರೋಪಗಳಿಗಷ್ಟೇ ಸೀಮಿತವಾಗಬಾರದು
ಲೈಂಗಿಕ ಕಿರುಕುಳದ ಬಗ್ಗೆ ಕೇವಲ ಆರೋಪಗಳನ್ನು ಮಾಡಿದರೆ ಸಾಲದು, ಸಂತ್ರಸ್ತೆಯರು ಅಧಿಕೃತ ದೂರು ದಾಖಲಿಸಬೇಕು ಎಂದು ಮಹಿಳಾ ಆಯೋಗ ಹೇಳಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಕೇಳಿಬರುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿಯೂ ಆಯೋಗ ತಿಳಿಸಿದೆ.

ಪ್ರೀತಿ ಜಿಂಟಾ ಸಲ್ಲಿಸಿದ್ದ ಅರ್ಜಿ ವಜಾ
ಉದ್ಯಮಿ ನೆಸ್‌ ವಾಡಿಯಾ ಅವರಿಂದ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಪ್ರೀತಿ ಜಿಂಟಾ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ. ಎರಡು ದಿನಗಳ ಹಿಂದೆ ಈ ಪ್ರಕರಣವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ಕೋರ್ಟ್‌ ಸೂಚಿಸಿತ್ತು. ಆದರೆ, ನಟ ಕ್ಷಮಾಪಣೆಗೆ ಒಪ್ಪದ ಕಾರಣ ನ್ಯಾಯಾಲಯದಲ್ಲೇ ವಿಚಾರಣೆಗೆ ಮನವಿ ಮಾಡಿದ್ದ ಪ್ರೀತಿಗೆ ಹಿನ್ನಡೆಯಾಗಿದೆ. 2014ರಲ್ಲಿ ಐಪಿಎಲ್‌ ಪಂದ್ಯದ ವೇಳೆಯಲ್ಲಿ ವಾಡಿಯಾ ಕಿರುಕುಳ ನೀಡಿದ್ದರು ಎಂದು ಪ್ರೀತಿ ಆರೋಪಿಸಿದ್ದರು.

ನನ್ನ ವಿರುದ್ಧ ಆರೋಪಿಸಿರುವ ಅನಾಮಿಕರಿಗೆ ನನ್ನ ಪ್ರತಿಕ್ರಿಯೆ ಇಲ್ಲಿದೆ. ನನ್ನ ಕಡೆಯಿಂದ ಏನೇ ತಪ್ಪಾಗಿದ್ದರೂ ಕ್ಷ ಮೆ ಇರಲಿ. ನನ್ನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಚಿನ್ಮಯಿ ವಿರುದ್ಧ ಆಕ್ರಮಣ ಮಾಡಲು ಹೋಗಲ್ಲ. ನಾನು ಪ್ರಾಮಾಣಿಕವಾಗಿದ್ದೇನೆ.

 

- ರಘು ದೀಕ್ಷಿತ್‌, ಗಾಯಕ.

Published On: 11 October 2018, 04:47 AM English Summary: The 'Me To To' Storm, Charges - The Tragedy

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.