ಬೀದರ್ ನಗರದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜುಲೈ 3ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ‘ಮಣ್ಣು ಮತ್ತು ನೀರು ಸಂರಕ್ಷಣಾ ತಾಂತ್ರಿಕತೆ ಹಾಗೂ ಬೋರವೆಲ್ ರೀಚಾರ್ಜ್ ಮಾಡುವ ವಿಧಾನ’ ವಿಷಯ ಕುರಿತಂತೆ ಆನ್ಲೈನ್ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.
ಕೃಷಿ ವಿಜ್ಞಾನ ಕೇಂದ್ರ, ಬೀದರ್ ನಡೆಸುತ್ತಿರುವ ಸರಣಿ ಆನ್ ಲೈನ್ ಕಾರ್ಯಕ್ರಮ ಕೆವಿಕೆ- ಕೃಷಿ ಪಾಠ ಶಾಲೆ ಅಡಿಯಯಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಯಲ್ಲಿ ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿರುವ (ಮಣ್ಣು ಮತ್ತು ನೀರು ತಾಂತ್ರಿಕತೆ) ಡಾ. ರಾಜಕುಮಾರ ಹಳಿದೊಡ್ಡಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು ಪ್ರಸ್ತುತ ಬಳಕೆಯಲ್ಲಿರುವ ಮಣ್ಣು ಮತ್ತು ನೀರಿನ ಸಂರಕ್ಷಣಾ ತಾಂತ್ರಿಕತೆಗಳು, ಅವುಗಳ ಬಳಕೆ ಅಥವಾ ಅಳವಡಿಕೆಯಿಂದ ಕೃಷಿಕರಿಗೆ ಆಗಲಿರುವ ಪ್ರಯೋಜನಗಳು ಹಾಗೂ ಅಂತರ್ಜಲ ಮರುಪೂರಣದಿಂದ ಇರುವ ಪ್ರಯೋಜನಗಳ ಕುರಿತು ರೈತರಿಗೆ ಮಾಹಿತಿ ನೀಡಲಿದ್ದಾರೆ.
ಗೂಗಲ್ ಮೀಟ್ ವೇದಿಕೆಯಲ್ಲಿ ತರಬೇತಿ ಕಾರ್ಯಾಗಾರವು ನಡೆಯಲಿದ್ದು, ಆಸಕ್ತ ರೈತರು https://meet.google.com/eex-yaab-tgr ಈ ಲಿಂಕ್ ಬಳಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ಸಂಖ್ಯೆಯ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆಯುವ ಮುಲಕ ತಮ್ಮ ಕೃಷಿ ಭೂಮಿಯಲ್ಲಿ ನೀರಿನ ಸದುಪಯೋಗ ಮಾಡಿಕೊಳ್ಳುವ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಬೀದರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾಗಿರುವ ಡಾ. ಸುನೀಲಕುಮಾರ ಎನ್.ಎಂ ಅವರು ವಿನಂತಿ ಮಾಡಿದ್ದಾರೆ.
Share your comments