ರಾಸಾಯನಿಕಗಳನ್ನು ಬಳಸಿ ಮಾಡುತ್ತಿರುವ ವ್ಯವಸಾಯದಿಂದಾಗಿ ಮಣ್ಣಿನ ಮೇಲೆ ಹಾಗೂ ಬೆಳೆಗಳ ಮೇಲೆ ಹಲವು ರೀತಿಯ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂದು ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿಸ್ತರಣಾ ಮುಂದಾಳು ಡಾ.ರೇವಣಪ್ಪ ಅವರು ತಿಳಿಸಿದರು.
ಯಾದಗಿರಿ ಜಿಲ್ಲೆಯ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಯಾದಗಿರಿ ತೋಟಗಾರಿಕೆ ಇಲಾಖೆ ಮತ್ತು ಬೆಸ್ಟ್ ರಿಕಗ್ನೇಷನ್ ಪ್ರೈವೇಟ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಪರಂಪರಾಗತ ಕೃಷಿ ವಿಕಾಸ ಯೋಜನೆ’ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಯಲ್ಲಿ ಮಿತಿ ಮೀರಿ ರಾಸಾಯನಿಕಗಳನ್ನು ಬಳಸುತ್ತಿರುವ ಕಾರಣ, ಮಣ್ಣಿನ ಫಲವತ್ತತೆ ಇಳಿಮುಖ, ಮಣ್ಣಿನ ರಚನೆಯ ಹಾಳಾಗುವಿಕೆ, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕುಂಠಿತ, ಮಣ್ಣಿನ ಕೊಚ್ಚಣೆ, ಮಣ್ಣಿನ ಆಳ ಕಡಿಮೆ ಆಗುವುದು, ಮಣ್ಣಿನಲ್ಲಿರುವ ಸೂಕ್ಶ್ಮಾಣು ಜೀವಿಗಳ ನಾಶ, ಚೌಳು ಮತ್ತು ಕ್ಷಾರ ಮಣ್ಣಾಗುವಿಕೆ ಮತ್ತು ಬಸಿಯುವಿಕೆ ಕಡಿಮೆ ಸೇರಿದಂತೆ ಮಣ್ಣಿನ ಮೇಲೆ ಹಲವು ದುಷ್ಪರಿಣಾಮಗಳಾಗುತ್ತಿವೆ ಎಂದರು.
ಬೆಳೆ, ಪರಿಸರದ ಮೇಲೆ ದುಷ್ಪರಿಣಾಮ
ಇದೇ ವೇಳೆ, ಬೆಳೆಗಳ ವೈವಿಧ್ಯತೆ ಕಡಿಮೆಯಾಗುವುದು, ಬೆಳೆಗಳ ಬರ ನಿರೋಧಕ ಶಕ್ತಿ ಕುಂಠಿತ, ವಾಣಿಜ್ಯ ಬೆಳೆಗಳು, ಪೌಷ್ಟಿಕ ಬೆಳೆಗಳ ಸ್ಥಳ ಆಕ್ರಮಿಸುತ್ತಿರುವುದು, ಲೇಡಿ ಬರ್ಡ್ ಬೀಟಲ್, ಕಣಜ, ಗ್ರೀನ್ ಲೆಸವಿಂಣ್ ಮುಂತಾದ ಉಪಕಾರಿ, ರೈತ ಮಿತ್ರ ಕೀಟಗಳ ಸಂಖ್ಯೆ ಕಡಿಮೆ ಆಗುವುದು, ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ, ಒಂದೇ ಜಾತಿಯ ಕಳೆಗಳು ಮತ್ತು ನಿಯಂತ್ರಿಸಲು ಕಷ್ಟವಾದ ಕಳೆಗಳ ಉದ್ಬವ (ಉದಾ; ಪಾರ್ಥೇನಿಯಂ), ಕೃಷಿಕರ ಆರೋಗ್ಯ ಹಾಗೂ ರಾಸಾಯನಿಕ ಬಳಸಿ ಬೆಳೆದ ಬೆಳೆಗಳನ್ನು ಆಹಾರವಾಗಿ ಸೇವಿಸುವ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದರು.
ಅಷ್ಟು ಮಾತ್ರವಲ್ಲದೆ, ಬೆಳೆಗಳಿಗೆ ಅವೈಜ್ಞಾನಿಕವಾಗಿ ರಾಸಾಯನಿಕಗಳನ್ನು ಬಳಸುವುದರಿಂದ ಪರಿಸರ ಮತ್ತು ಸಮಾಜದ ಮೇಲೂ ದುಷ್ಪರಿಣಾಮ ಆಗುತ್ತಿದೆ. ಅಂತರ್ಜಲದಲ್ಲಿ ಭಾರಿ ಕುಸಿತ, ಖನಿಜ-ತೈಲ ಸಂಪನ್ಮೂಲಗಳ ಇಳಿಕೆ, ಸ್ಥಳೀಯ ಸಂಸ್ಕೃತಿ ಮರೆಯಾಗುವಿಕೆಗೆ ರಾಸಾಯಯನಿಕಗಳ ಬಳಕೆ ಕಾರಣವಾಗುತ್ತಿದೆ ಎಂದು ಹೇಳಿದ ಡಾ. ರೇವಣಪ್ಪ ಅವರು, ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಳ, ಬೆಳೆದ ಬೆಳೆಗೆ ಸರಿಯಾದ ದರ ಸಿಗದಿರುವಿಕೆ, ರೈತ ಸಂಕಷ್ಟಕ್ಕೆ ಮತ್ತು ಒತ್ತಡಕ್ಕೆ ಸಿಲುಕುತ್ತಿರುವುದು ಸೇರಿ ಆರ್ಥಿಕತೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ಅವೈಜ್ಞಾನಿಕ ಹಾಗೂ ರಾಸಾಯನಿಕ ಕೃಷಿ ಪದ್ಧತಿ ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ಮತ್ತಷ್ಟು ಗಂಭೀರ ಸಮಸ್ಯೆಗಳು ಎದುರಾಗಲಿವೆ ಎಂದು ಎಚ್ಚರಿಸಿದರು.
ಪರಂಪರಾಗತ ಕೃಷಿ ಪರಿಹಾರ
ಹೀಗೆ ಹತ್ತಾರು ಕಾರಣಗಳಿಂದಾಗಿ ನಮ್ಮ ಆರೋಗ್ಯ, ಸಮಾಜದ ಸ್ವಾಸ್ತ್ಯ ಹಾಗೂ ಪರಿಸರದ ಸಮತೋಲನ ಹಾಳಾಗುತ್ತಿದೆ. ಇವೆಲ್ಲವನ್ನೂ ತಡೆದು ಸುಖ, ಸಮೃದ್ಧಿಯ ಜೀವನ ನಡೆಸಲು ಇರುವ ಒಂದೇ ಒಂದು ಮಾರ್ಗವೆಂದರೆ ಅದು, ಪರಂಪರಾಗತ ಕೃಷಿ ಮಾತ್ರ ಎಂದು ಹೇಳಿದ ಡಾ. ರೇವಣಪ್ಪ ಅವರು, ಸಾವಯವ ಕೃಷಿ ಹಾಗೂ ಸುಸ್ಥಿರ ಕೃಷಿ ಬಗ್ಗೆ ಮಾತನಾಡುತ್ತಾ ಸಾವಯವ ಬೇಸಾಯದ ಅವಶ್ಯಕತೆ, ಸಾವಯವ ಕೃಷಿಯಲ್ಲಿ ಗಮನಿಸಬೇಕಾದ ಅಂಶಗಳು, ಸಾವಯವ ಕೃಷಿಯ ಮೂಲ ತತ್ವಗಳ ಮೇಲೆ ಬೆಳಕು ಚೆಲ್ಲಿದರು.
ಸಹಾಯಕ ಪ್ರಾಧ್ಯಾಪಕ ಡಾ.ಪ್ರಶಾಂತ ಅವರು ಮಾತನಾಡಿ, ಮೋಹಕ ಬಲೆ, ಅಂಟು ಬಲೆ ಬಳಕೆ ಮತ್ತು ಹೊದಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಸಾವಯವ ಕೃಷಿಯಲ್ಲಿ ರೋಗ ಮತ್ತು ಕೀಟಗಳನ್ನು ಸಮಗ್ರವಾಗಿ ನಿರ್ವಹಣೆ ಮಾಡಬಹುದು ಎಂದು ಹೇಳಿದರು. ಜೊತೆಗೆ, ಜೈವಿಕ ಗೊಬ್ಬರಗಳಾದ ಟ್ರೆಕೊಡರ್ಮ, ಸುಡೊಮೋನಸ್, ಅಜಟೋಬ್ಯಾಕ್ಟರ್ ಉಪಯೋಗದಿಂದ ರೋಗಗಳ ನಿರ್ವಹಣೆ, ಸಸ್ಯಮೂಲ ಹಾಗೂ ಜೈವಿಕ ಕೀಟನಾಶಕಗಳು ಮತ್ತು ಅವುಗಳ ಬಳಕೆ ಬಗ್ಗೆ ವಿವರಿಸಿದರು.
ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ (ಗಂಜ್) ದಲ್ಲಿರುವ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಗುರುವಾರ (ಜು.29) ನಡೆದ ಕಾರ್ಯಕ್ರಮದಲ್ಲಿಯಾದಗಿರಿ ಜಿಲ್ಲೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾಗಿರುವ ಅಜಿಮೊದ್ದಿನ್ ಅವರು ಪರಂಪರಾಗತ ಕೃಷಿ ವಿಕಾಸ ಯೋಜನೆ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ಬೀರಲಿಂಗ ಪೂಜಾರಿ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಸುಂದರೇಶ, ಪವನಕುಮಾರ ಹಾಗೂ 30ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
Share your comments