ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯ, ಹಾವೇರಿ ಜಿಲ್ಲೆ ಹನುಮನಮಟ್ಟಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಗ್ರಿ ಸಲ್ಯೂಷನ್ಸ್ ಕರ್ನಾಟಕ ವತಿಯಿಂದ ‘ಈರುಳ್ಳಿ ಬೆಳೆಯ ತತ್ಕಾಲ ನಿರ್ವಹಣೆ’ ಕುರಿತು ಆಗಸ್ಟ್ 6ರಂದು ವೆಬಿನಾರ್ ಮತ್ತು ರೈತ-ವಿಜ್ಞಾನಿಗಳ ಸಂಧ್ಯಾ ವಿಚಾರಗೋಷ್ಠಿ ಆಯೋಜಿಸಲಾಗಿದೆ.
ಶುಕ್ರವಾರ ಸಂಜೆ 6 ಗಂಟೆಗೆ ಆರಂಭವಾಗಲಿರುವ ಸಂಧ್ಯಾ (ಸಂಜೆಯ) ವಿಚಾರಗೋಷ್ಠಿಯಲ್ಲಿ ಧಾರವಾಡ ಕೃಷಿ ವಿವಿಯ ಸಹ ವಿಸ್ತರಣಾ ನಿರ್ದೇಶಕರಾಗಿರುವ ಡಾ.ಪಿ.ಎಸ್.ಹೂಗಾರ ಅವರು ಪ್ರಸ್ತಾವಿಕವಾಗಿ ಮಾತನಾಡಲಿದ್ದು, ಕೃಷಿ ಸಲಹೆಗಾರರು ಮತ್ತು ದಾವಣಗೆರೆಯ ಇಕೋ ಅಗ್ರಿಪ್ರೆನೂರ್ಸ್ನ ಪ್ರತಿನಿಧಿ ಎಂ.ನಾಗನಗೌಡ ಮಲ್ಕಾಜಿ ಅವರು ಸಂಪನ್ಮೂಲ ತಜ್ಞರಾಗಿ ಭಾಗವಹಿಸುವರು. ನಿವೃತ್ತ ಜಂಟಿ ಕೃಷಿ ನಿರ್ದೇಶಕರಾಗಿರುವ ಡಾ.ಆರ್.ಜಿ.ಗೊಲ್ಲರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡುವರು.
ಗೂಗಲ್ ಮೀಟ್ ವೇದಿಕೆಯಲ್ಲಿ ಈ ಆನ್ಲೈನ್ ಕಾರ್ಯಾಗಾರವು ನಡೆಯಲಿದ್ದು, ಆಸಕ್ತ ರೈತ ಬಾಂಧವರು https://meet.google.com/uaj-ykaw-uoy ಈ ಲಿಂಕ್ ಬಳಸಿಕೊಂಡು ಭಾಗವಹಿಸಬಹುದು. ಈರುಳ್ಳಿ ಒಂದು ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಬೆಳೆಯ ನಿರ್ವಹಣೆ ಮತ್ತು ರಕ್ಷಣೆ ಕುರಿತು ಸಕ್ಷಮ ಮಾಹಿತಿ, ಬೆಂಬಲ ಪಡೆಯಲು ಈ ತರಬೇತಿ ಮತ್ತು ವಿಜ್ಞಾನಿಗಳ ಜೊತೆಗಿನ ವಿಚಾರಗೋಷ್ಠಿಯು ರೈತರಿಗೆ ಸಹಕಾರಿಯಾಗಲಿದೆ. ಹೀಗಾಗಿ ರಾಜ್ಯದ ಈರುಳ್ಳಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಹಾವೇರಿ ಜಿಲ್ಲೆ ಹನಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿ ಡಾ.ಅಶೋಕ ಪಿ. ಅವರು ಮನವಿ ಮಾಡಿದ್ದಾರೆ.
ಉಳ್ಳಾಗಡ್ಡಿ ಅಥವಾ ಈರುಳ್ಳಿ ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕದ ಅತಿ ಮುಖ್ಯವಾಗಿರುವ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಅಡುಗೆ ಮನೆಯಲ್ಲಿ ಈರುಳ್ಳಿ ಇಲ್ಲದೆ ಯಾವ ಅಡುಗೆಯೂ ಆಗುವುದಿಲ್ಲ. ಗೃಹಹಿಣಿಯರು ಈರುಳ್ಳಿಯನ್ನು ಒಂದು ತರಕಾರಿಯಾಗಿ ಹಾಗೂ ಸಾಂಬಾರು ಪದಾರ್ಥವಾಗಿಯೂ ಬಳಸುತ್ತಾರೆ. ಇನ್ನು ಇದನ್ನು ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಮುಖ್ಯ ಬೆಳೆಯಾಗಿ ಬೆಳೆದರೆ ಇತರ ಭಾಗದಲ್ಲಿ ಬೇರೆ ಬೆಳೆಗಳ ಜೊತೆ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಗದಗ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಯಾಗಿ ಗುರುತಿಸಿಕೊಂಡಿದೆ.
ವರ್ಷದ ಎಲ್ಲ ಕಾಲದಲ್ಲೂ ಈರುಳ್ಳಿ ಬೆಳೆಯಬಹುದು. ಆದರೆ ಬೆಳೆ ನಾಟಿ ಅಥವಾ ಬಿತ್ತನೆಗೆ ಜನವರಿ-ಫೆಬ್ರುವರಿ, ಜೂನ್-ಜುಲೈ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳು ಸೂಕ್ತ ಎಂದು ಪರಿಗಣಿಸಲಾಗುತ್ತದೆ. ಸೂರ್ಯನ ಬೆಳಕು ಮತ್ತು ಉಷ್ಣಾಂಶ ಏರಿಳಿತವಾದಲ್ಲಿ ಬೆಳೆಗೆ ಹಾನಿಯಾಗುತ್ತದೆ. ಹೀಗಾಗಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳೆದ ಈರುಳ್ಳಿ ಗೆಡ್ಡೆಗಳು ಉತ್ತಮ ಗುಣಮಟ್ಟದ್ದಾಗಿರುತ್ತವೆ ಎನ್ನುತ್ತಾರೆ ತಜ್ಞರು. ನಿರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡುಮಣ್ಣು ಈರುಳ್ಳಿ ಬೆಳೆಯಲು ಅತ್ಯಂತ ಸೂಕ್ತ ಎಂದೆನಿಸಿದೆ. ಅಗತ್ಯ ಪ್ರಮಾಣದಲ್ಲಿ ಗಂಧಕವನ್ನು ಬೆಳೆಗೆ ನೀಡುವುದರಿಂದ ಈರುಳ್ಳಿಯ ಗಾತ್ರ ದೊಡ್ಡದಾಗುತ್ತದೆ. ಇದರೊಂದಿಗೆ ಸೂಕ್ತ ಸಮಯಕ್ಕೆ ಸಮರ್ಪಕ ಪ್ರಮಾಣದ ಸಾರಜನಕ ಮತ್ತಿತರ ಪೋಷಕಾಂಶಗಳನ್ನು ಬೆಳೆಗೆ ಒದಗಿಸಿದ್ದೇ ಆದರೆ, ರೈತರು ಬಂಪರ್ ಇಳುವರಿ ಪಡೆಯಬಹುದು. ಈ ಬಗ್ಗೆ ಮಾಹಿತಿ ನೀಡಲೆಂದೇ ಹಾವೇರಿ ಕೆವಿಕೆ ಈ ವೆಬಿನಾರ್ ಆಯೋಜಿಸಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವವರು ಮೊದಲು ತಮ್ಮ ಸ್ಮಾರ್ಟ್ ಫೋನ್ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.
ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು.
Share your comments