ರೈತರಿಗೆ ಸಹಕಾರ ಬ್ಯಾಂಕ್ ಹಾಗೂ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡುವ 2019-20ನೇ ಸಾಲಿನಲ್ಲಿ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರುಪಾಯಿವರೆಗೆ ನೀಡುವ ಬೆಳೆ ಸಾಲ ಮುಂದುವರೆಸಲು ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರರೂ ಆಗಿರುವ ರೈತರು ಹಾಗೂ ಒಂದೇ ರೈತ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಬಡ್ಡಿರಹಿತ ಸಾಲ ಪಡೆಯಲು ಅಡ್ಡಿಯಾಗಿದ್ದ ಷರತ್ತುಗಳನ್ನು ಸಡಿಲಗೊಳಿಸಿ ಸಹಕಾರ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.
ಪರಿಷ್ಕೃತ ಆದೇಶದಿಂದಾಗಿ ಒಂದೇ ಕುಟುಂಬದಲ್ಲಿರುವ ಅಣ್ಣತಮ್ಮಂದಿರೂ ಪ್ರತ್ಯೇಕ ಪಹಣಿ, ಗೇಣಿ, ಸಾಗುವಳಿ ಪತ್ರ ಹೊಂದಿದ್ದರೆ ಸಾಲ ಪಡೆಯಬಹುದು. ಸರ್ಕಾರಿ ನೌಕರರಾಗಿರುವ ರೈತರು ಕೂಡ 2019-20ನೇ ಸಾಲಿನಲ್ಲಿ 3 ಲಕ್ಷ ರುಪಾಯಿವರೆಗೆ ಶೂನ್ಯ ಬಡ್ಡಿದರದ ಸಾಲ ಪಡೆಯಬಹುದು.
ರಾಜ್ಯ ಸಹಕಾರ ಇಲಾಖೆಯು ಕಳೆದ ಮಾ. 30 ರಂದು 2019-20ನೇ ಸಾಲಿನ ಸಾಲ ನಿಯಮಾವಳಿ ಬದಲಿಸಿತ್ತು. ಸಹಕಾರಿ ಸಂಸ್ಥೆಗಳಲ್ಲಿನ 3 ಲಕ್ಷ ರು.ವರೆಗಿನ ಬಡ್ಡಿ ರಹಿತ ಸಾಲ ಸೌಲಭ್ಯ ಪಡೆಯಲು ಒಂದು ರೈತ ಕುಟುಂಬದ ಒಬ್ಬ ರೈತ ಮಾತ್ರ ಅರ್ಹ ಹಾಗೂ ರೈತರು ಸರ್ಕಾರಿ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ನೌಕರರಾಗಿದ್ದರೆ, ಮಾಸಿಕ 20 ಸಾವಿರ ರು.ಗಿಂತ ಹೆಚ್ಚು ವೇತನ, ಹೆಚ್ಚು ವೇತನ, ಪಿಂಚಣಿ ಪಡೆಯುತ್ತಿದ್ದರೆ ಮತ್ತು ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಸಾಲ ಸೌಲಭ್ಯಕ್ಕೆ ಅರ್ಹರಲ್ಲ ಎಂದು ಆದೇಶ ಹೊರಡಿಸಿತ್ತು. ಇದಕ್ಕೆ ರೈತ ಸಮೂಹದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಇಂತಹ ನಿಬಂಧ ನೆಗಳನ್ನು ವಾಪಸ್ ಪಡೆಯಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿದ್ದವು. ಹೀಗಾಗಿ ಸರ್ಕಾರಹೊಸದಾಗಿ ಕೆಲವು ಮಾರ್ಪಾಡು ಮಾಡಿದ ಷರತ್ತುಗಳೊಂದಿಗೆ ಸಾಲ ನೀಡಿಕೆಯ ಆದೇಶ ನೀಡಿದೆ.
Share your comments