ಬಿಎಸ್‍ವೈ ಕೃಷ್ಣ, ನಾನು ಅರ್ಜುನ ಇದ್ದಂಗೆ: ಬಾಬುರಾವ್ ಚಿಂಚನಸೂರ್
ಯಾದಗಿರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೃಷ್ಣ. ನಾನು ಅರ್ಜುನ ಇದ್ದಂತೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ನಡೆದ ಮೋದಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಮಾಜಿ ಸಚಿವರು, ಕೃಷ್ಣ (ಬಿ.ಎಸ್.ಯಡಿಯೂರಪ್ಪ) ಯಾವಾಗ ಬಾಣ ಬಿಡು ಅಂತಾರೆ ಆಗ ನಾನು ಬಾಣ ಬಿಡುತ್ತೇನೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ವಿಜಯ ಬಿಜೆಪಿ ಪತಾಕೆ ಹಾರಿಸುತ್ತೆವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗುರುಮಠಕಲ್ ಕ್ಷೇತ್ರ ಪರ್ಸೆಂಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಹಣ ಕೊಟ್ಟರೆ ಮಾತ್ರ ಕ್ಷೇತ್ರದಲ್ಲಿ ಕೆಲಸವಾಗುತ್ತದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚಿಂಚನಸೂರ್ ಗಂಭೀರವಾಗಿ ಆರೋಪಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಮಾಜಿ ಸಚಿವರು, ದೇಶದಲ್ಲಿ ಸದ್ಯ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ಅದಕ್ಕಾಗಿ ಪ್ರಿಯಾಂಕ ವಾದ್ರಾ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆ ಬಿಂಬಿಸುತ್ತಿದ್ದಾರೆ. ಇಂದಿರಾ ಗಾಂಧಿ ಆಡಳಿತದ ಬಗ್ಗೆ ಪ್ರಿಯಾಂಕ ಅವರಿಗೆ ಏನು ಗೊತ್ತು. ರಾಜಕೀಯ ಅನುಭವವಾಗಲು ಇನ್ನೂ 20ರಿಂದ 30 ವರ್ಷ ಬೇಕಾಗುತ್ತದೆ ಎಂದು ಕಿಡಿಕಾರಿದರು.
Published On: 22 February 2019, 10:35 PMEnglish Summary: ಬಿಎಸ್‍ವೈ ಕೃಷ್ಣ, ನಾನು ಅರ್ಜುನ ಇದ್ದಂಗೆ: ಬಾಬುರಾವ್ ಚಿಂಚನಸೂರ್
Share your comments