ಬಿತ್ತಿದ ಬೆಳೆ ಸೊಗಸಾಗಿ ಬೆಳೆಯಬೇಕು. ಸಮಯಕ್ಕೆ ಸರಿಯಾಗಿ ಹೂ ಕಿತ್ತು, ತೆನೆ ಬಿಟ್ಟು ಒತ್ತಾಗಿ ಕಾಳು ಹಿಡಿಯಬೇಕು. ತರಕಾರಿ ಗಿಡ, ಬಳ್ಳಿಗಳು ಬಹಳಷ್ಟು ಕಾಯಿ ಬಿಡಬೇಕು. ಹಣ್ಣಿನ ಮರಗಳು ಮೈ ತುಂಬಾ ಕಾಯಿ ಬಿಟ್ಟು ಕಂಗೊಳಿಸಬೇಕು. ಕಡೆಯಲ್ಲಿ ಇಳುವರಿ ಉತ್ತಮವಾಗಿ ಬರಬೇಕು. ಒಳ್ಳೆ ಬೆಲೆ ಸಿಗಬೇಕು. ಆಗಷ್ಟೇ ರೈತನಿಗೆ ಖುಷಿ. ಆತ ಪಟ್ಟ ಶ್ರಮಕ್ಕೆ, ಸುರಿಸಿದ ಬೆವರಿಗೆ ತಕ್ಕ ಪ್ರತಿಫಲ. ಎಲ್ಲಕ್ಕಿಂತ ಮುಖ್ಯವಾಗಿ ಹಾಕಿದ ಬಂಡವಾಳಕ್ಕೆ ಮೋಸವಾಗಲಿಲ್ಲ, ಹಾಕಿದ್ದಕ್ಕಿಂತಲೂ ಹೆಚ್ಚು ಹಣ ಹಿಂಪಡೆದೆನೆಂಬ ನೆಮ್ಮದಿ.
ಪ್ರಸ್ತುತ ಹಾಗೆ ನೆಮ್ಮದಿಯ ನಗೆ ಬೀರುತ್ತಿರುವವರು ರಾಣಿಬೆನ್ನೂರು ತಾಲೂಕು ಬೆನಕನಕೊಂಡಿ ಗ್ರಾಮದ ರೈತ ಸಂಗನಗೌಡ ಮಲಗೌಡರ. ಸಂಗನಗೌಡ ಅವರು ಒಂದು ಎಕರೆ ಹೊಲದಲ್ಲಿ ಬೀಟ್ರೂಟ್ ಬೆಳೆದಿದ್ದಾರೆ. ಈ ಬಾರಿ ಬಿತ್ತಿದ ಬೀಜಗಳಲ್ಲಿ ಬಹಳಷ್ಟು ಮೊಳಕೆ ಒಡೆಯಲೇ ಇಲ್ಲ. ಸಸಿಯಿಂದ ಸಸಿಯ ನಡುವೆ ಬಹಳಷ್ಟು ಜಾಗ ಕಾಣುತ್ತಿತ್ತು (ಅಂಗಲ). ಹಾಕಿದ ಬಂಡವಾಳವಾದರೂ ಬರುತ್ತೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಆದರೆ, ಬೆಳೆದಿರುವ ಅಷ್ಟೂ ಬೀಟ್ರೂಟ್ ಗಿಡಗಳು ಭರಪೂರ ಬೆಳೆ ನೀಡಿವೆ. ಹೀಗಾಗಿ ಸಂಗನಗೌಡ ಮಲಗೌಡರ್ ಖುಷಿಯಾಗಿದ್ದಾರೆ.
ಹತ್ತೇ ನಿಮಿಷದಲ್ಲಿ ಖಾಲಿ
ಸಂಗನಗೌಡ ಅವರು ಕಳೆದ ಹಲವು ವರ್ಷಗಳಿಂದ ಬೀಟ್ರೂಟ್ ಬೆಳೆಯುತ್ತಿದ್ದಾರೆ. ಪ್ರತಿ ಬಾರಿಯೂ ಉತ್ತಮ ಇಳುವರಿಯೇ ಬರುತ್ತಿದೆ. ಮಳೆಗಾಲದಲ್ಲಿ ಇಳುವರಿ ಪ್ರಮಾಣ ಸ್ವಲ್ಪ ಹೆಚ್ಚು ಎನ್ನಲು ಅಡ್ಡಿಯಿಲ್ಲ. ಆದರೆ, ಬೀಟ್ರೂಟ್ ಗಾತ್ರ ಹಾಗೂ ಬೆಲೆ ಯಾವಾಗಲೂ ಕೈಕೊಡುತ್ತಿತ್ತು. ಈ ಬಾರಿ ಹಾಗಾಗಲಿಲ್ಲ. ಗೌಡರ ಹೊಲದಲ್ಲಿ ಅಂಗೈಗಿಂತಲೂ ದೊಡ್ಡ ಗಾತ್ರದ ಬೀಟ್ರೂಟ್‌ಗಳು ಬೆಳೆದವು. ಎಲ್ಲ ಬೀಟ್ರೂಟ್‌ಗಳ ಗಾತ್ರ ಬಹುತೇಕ ಸಮನಾಗೇ ಇದೆ. ಈ ಗಾತ್ರ ನೋಡಿಯೇ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಕೊಳ್ಳಲು ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದಾರೆ. ಮೊದಲ ದಿನ ಸಂಗನಗೌಡ ಅವರು ಕಟಾವು ಮಾಡಿದ ಬೀಟ್ರೂಟ್ ತೆಗೆದುಕೊಂಡು ಹೋದಾಗ ಅವರಿಗೇ ಆಶ್ಚರ್ಯ. ಮಾರುಕಟ್ಟೆಗೆ ಹೋದ ಕೇವಲ 10 ನಿಮಿಷದಲ್ಲಿ 500 ಕೆ.ಜಿ ಮಾಲು ಖಾಲಿ! ಮರುದಿನವೂ ಅದೇ ಮರುಕಳಿಸಿತು. ಜೊತಗೆ ಈ ಬಾರಿ ಉತ್ತಮ ಬೆಲೆ ಕೂಡ ದೊರೆತದ್ದು ರೈತನ ಸಂತೋಷವನ್ನು ಇಮ್ಮಡಿಗೊಳಿಸಿತು.
ಇಳುವರಿ ಜೊತೆ ಕೈ ಹಿಡಿದ ಬೆಲೆ
ಹಿಂದೆಲ್ಲಾ ಒಂದು ಕೆ.ಜಿ ಬೀಟ್ರೂಟ್‌ಗೆ 6 ರೂ. ಸಿಗುತ್ತಿತ್ತು. ಕೆಲವೊಮ್ಮೆ 8 ರೂಪಾಯಿಗೆ ಮಾರಾಟವಾದರೆ ಅದೇ ಹೆಚ್ಚು. ಆದರೆ ಈ ಬಾರಿ ಮೊದಲ ದಿನವೇ ಕೆ.ಜಿಗೆ 12 ರೂ. ಸಿಕ್ಕಿದೆ. ಬಳಿಕ ದಿನದಿಂದ ದಿನಕ್ಕೆ ಬೆಲೆ ಹೆಚ್ಚುತ್ತಾ ಹೋಗಿದ್ದು, ಸರಾಸರಿ 18 ರೂಪಾಯಿಗಿಂತಲೂ ಅಧಿಕ ಬೆಲೆ ಸಿಗುತ್ತಿದೆ. ಕಳೆದ ನಾಲ್ಕೆöÊದು ದಿನಗಳಿಂದ ಕೆ.ಜಿ ಬೀಟ್ರೂಟ್ ಬೆಲೆ 25 ರೂಪಾಯಿ ಇದೆ. ಹೀಗಾಗಿ ಆದಾಯ ಒಂದು ಲಕ್ಷ ಮೀರುವುದರಲ್ಲಿ ಅನುಮಾನವೇ ಇಲ್ಲ ಎಂದು ಸಂಗನಗೌಡ ಅವರು ಹರ್ಷ ವ್ಯಕ್ತಪಡಿಸುತ್ತಾರೆ.
ಕಡಿಮೆ ವೆಚ್ಚ, ಹೆಚ್ಚು ಲಾಭ
ಆರಂಭದಲ್ಲಿ ಭೂಮಿಯ ಉಳುಮೆ ಮಾಡಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಜಿಪ್ಸಂ, ಜಿಂಕ್, ಬೋರಾನ್, ಕೋಳಿ ಗೊಬ್ಬರ ಹಾಕಿದ್ದೆ. ಬಳಿಕ ಸಕಾಟ ಕಂಪನಿಯ ಬೀಜ ಖರೀದಿ, ಕಳೆ ತೆಗೆಸಿದ ಕೂಲಿ ಎಲ್ಲವೂ ಸೇರಿ ಹೆಚ್ಚೆಂದರೆ 15ರಿಂದ 20 ಸಾವಿರ ರೂ. ವೆಚ್ಚವಾಗಿದೆ. ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ. ಕಪ್ಪು ಭೂಮಿಯಲ್ಲಿ ಬೀಟ್ರೂಟ್ ಬೆಳೆದರೆ ಒಳ್ಳೆಯ ಇಳುವರಿ ನೀರೀಕ್ಷಿಸಬಹುದು. ನಮ್ಮದು ಕೆಂಪು ನೆಲ. ಆದರೂ, ಬೀಟ್ರೂಟ್‌ನ ದೊಡ್ಡ ಗಾತ್ರ ಮತ್ತು ಏಕರೂಪತೆಯ ಕಾರಣದಿಂದಾಗಿ ಒಳ್ಳೆಯ ತೂಕ ಬಂದಿದೆ. ಹೀಗಾಗಿ ಈ ಬಾರಿ ಇಳುವರಿ ಕಡಿಮೆ ಇದ್ದರೂ ಆದಾಯವೇನು ಕಡಿಮೆಯಾಗಿಲ್ಲ. ಕಳೆದ ಬಾರಿ ಮುಕ್ಕಾಲು ಎಕರೆ ಬಿತ್ತನೆ ಮಾಡಿ ಒಳ್ಳೆಯ ಇಳುವರಿ ಪಡೆದರೂ ಖರ್ಚು ವೆಚ್ಚ ಎಲ್ಲವೂ ಸೇರಿ 50,000 ರೂ. ವಹಿವಾಟು ಆಗಿತ್ತು ಎನ್ನುತ್ತಾರೆ ರೈತ ಸಂಗನಗೌಡರು.
ದಿನಕ್ಕೆ ಐದೇ ಕ್ವಿಂಟಾಲ್
ಬೆಳೆ ಕಟಾವು ಮಾಡುವಾಗಲೂ ತಮ್ಮದೇ ಆದ ತಂತ್ರ ಉಪಯೋಗಿಸುವ ಸಂಗನಗೌಡ ಅವರು, ದಿನವೊಂದಕ್ಕೆ 5 ಕ್ವಿಂಟಾಲ್‌ಗಿAತ ಹೆಚ್ಚು ಬೀಟ್ರೂಟ್ ಅನ್ನು ನೆಲದಿಂದ ಬಗಿಯುವುದಿಲ್ಲ. ಕಾರಣವಿಷ್ಟೇ, ಹೆಚ್ಚು ಮಾಲು ಕೊಂಡೊಯ್ದರೆ ಬೇಡಿಕೆ ಕಡಿಮೆಯಾಗುತ್ತದೆ. ವ್ಯಾಪಾರಿಗಳು ಕೊಡುವ ಬೆಲೆಯಲ್ಲಿ ಎರಡು, ಮೂರು ರೂಪಾಯಿ ಕಡಿಮೆಗೆ ಕೇಳುತ್ತಾರೆ. ನಿಯಮಿತ ಪ್ರಮಾಣದ ಬೆಳೆ ಕಟಾವು ಮಾಡಿ ಕೊಂಡೊಯ್ದರೆ ಒಳ್ಳೆ ಬೆಲೆ ಸಿಗುತ್ತದೆ. ಕಡಿಮೆ ಮಾಲು ಇದೆ ಎಂಬ ಕಾರಣಕ್ಕೆ ವ್ಯಾಪಾರಿಗಳು ಬೇಗ ಖರೀದಿಸುತ್ತಾರೆ. ಬೀಟ್ರೂಟ್ ಗುಣಮಟ್ಟ ಉತ್ತಮವಾಗಿರವುದರಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಸಂಗನಗೌಡ ಅವರು ಮಾರುಕಟ್ಟೆಗೆ ಹೋದ ಹತ್ತೇ ನಿಮಿಷದಲ್ಲಿ ಬೀಟ್ರೂಟ್ ಮಾರಾಟವಾಗುತ್ತವೆ. ಇದರಿಂದ ಅವರ ಸಮಯ ಉಳಿತಾಯವಾಗುತ್ತಿದೆ.
ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ಸಂಗನಗೌಡ ಅವರು ಈಗ ಮತ್ತೊಂದು ಹೊಲದಲ್ಲಿ ಬೀಟ್ರೂಟ್ ನಾಟಿ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಬೀಜಗಳು ಉತ್ತವಾಗಿ ಮೊಳಕೆ ಹೊಡೆಯುವುದರಿಂದ ಈ ಬಾರಿ ಹೆಚ್ಚು ಕಾಳಜಿ ವಹಿಸಿದ್ದಾರೆ. ಜೊತೆಗೆ ಹಿಂದಿನ ಬಾರಿ ಹಾಕಿದ ಕಂಪನಿಯ ಬೀಜಗಳನ್ನೇ ಈಬಾರಿಯೂ ಬಿತ್ತನೆ ಮಾಡುತ್ತಿದ್ದಾರೆ. ಇವರ ಜಮೀನು ಇರುವ ಬೆನಕನಕೊಂಡಿ ಗ್ರಾಮದಿಂದ ರಾಣಿಬೆನ್ನೂರು ಮಾರುಕಟ್ಟೆ ಹತ್ತಿರದಲ್ಲೇ ಇದೆ. ಹೀಗಾಗಿ ಸಾಗಣೆ ವೆಚ್ಚ ಕಡಿಮೆಯಾಗಿದೆ. ಸಂಗನಗೌಡ ಅವರಂತೆ ಬುದ್ಧಿವಂತಿಕೆಯಿAದ ಕೃಷಿ ಮಾಡುವುದು ಇಂದಿನ ಅಗತ್ಯವಾಗಿದೆ. ರೈತರು ಈ ರೀತಿ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಆದಾಯ ಕೊಡಬಲ್ಲ ಬೆಳೆಗಳನ್ನು ಬೆಳೆದಾಗ ಆರ್ಥಿಕ ಮಟ್ಟ ಸುಧಾರಣೆಯಾಗುತ್ತದೆ. ಜೊತೆಗೆ ಹತ್ತಿರದಲ್ಲೇ ಮಾರುಕಟ್ಟೆ ಕಂಡುಕೊAಡರೆ ತಲೆನೋವವೇ ಇರುವುದಿಲ್ಲ.
Share your comments